ಸ್ಕೋಲಾಸ್ಟಿಸಿಸಮ್
	ಮಧ್ಯಯುಗದ ಪಶ್ಚಿಮ ಯುರೋಪಿನಲ್ಲಿ ಪ್ರಚಲಿತವಿದ್ದ ತತ್ತ್ವಜ್ಞಾನ ಪದ್ಧತಿ. ಇದು ತರ್ಕ ಪ್ರಧಾನವಾಗಿ, ಶುಷ್ಕ ಪಾಂಡಿತ್ಯದಿಂದ ಕೂಡಿದುದೆಂದು ಹೆಸರು ಪಡೆದಿದೆ. ಈ ತಾತ್ತ್ವಿಕ ಪರಂಪರೆಯಲ್ಲಿ ಬರುವ ತತ್ತ್ವಜ್ಞಾನಿಗಳಲ್ಲಿ ಅಷ್ಟಾಗಿ ಐಕ್ಯತೆ ಕಂಡುಬರದಿದ್ದರೂ ಇದೊಂದು ಪರಂಪರೆ ಎನಿಸಿದೆ. ಚೀನೀ ತತ್ತ್ವಜ್ಞಾನ ಎನ್ನುವುದು ಎಷ್ಟು ಸಮಂಜಸವೋ ಇದೂ ಅಷ್ಟೇ ಸಮಂಜಸ ಎಂಬುದು ವಿಮರ್ಶಕರ ಅಭಿಪ್ರಾಯ. ಸಂತ ಆನ್‍ಸೆಲ್ಮ್‍ನಿಂದ ಆರಂಭವಾಗಿ ಓಕಂನ ವಿಲಿಯಂವರೆಗೆ ಬೆಳೆದ ಈ ಪರಂಪರೆಯಲ್ಲಿ ಹಲವರು ಪ್ರಸಿದ್ಧರಾಗಿದ್ದಾರೆ. 

	ಕ್ರೈಸ್ತ ತತ್ತ್ವಜ್ಞಾನಿಗಳಲ್ಲಿ ಸೇಂಟ್ ಅಗಸ್ಟೈನ್ ಬಹಳ ಪ್ರಾಚೀನನಾದವ. ಇವನು ಪ್ಲೇಟೋವಿನ ತತ್ತ್ವಜ್ಞಾನದಲ್ಲಿ ಕ್ರೈಸ್ತಧರ್ಮಕ್ಕೆ ಬಹಳ ಹಿತವಾದ ಹೊಂದಾಣಿಕೆಯನ್ನು ಕಂಡ. ಇವನ ತತ್ತ್ವಜ್ಞಾನಕ್ಕೆ ನಿಯೋಪ್ಲೇಟಾನಿಸಂ (ನವೀನ ಪ್ಲೇಟೋಧರ್ಮ) ಎಂದು ಹೆಸರಾಯಿತು. ಇದರ ಪ್ರಭಾವ ಪಾಶ್ಚಾತ್ಯ ವಿಚಾರವಂತರ ಮೇಲೂ ಆಯಿತು. ಅಗಸ್ಟೈನ್ ಮತ್ತು ಇತರರು ಪ್ಲೇಟೋ ಮತ್ತು ಅರಿಸ್ಟಾಟಲ್‍ನ ಕೆಲವು ಲ್ಯಾಟಿನ್ ಗ್ರಂಥಗಳನ್ನು ಓದಿಕೊಂಡಿದ್ದು ಒಳ್ಳೆಯ ವಿದ್ವಾಂಸರೂ ಆಗಿದ್ದರು. 

	ನವೀನ ಪ್ಲೇಟೋ ಧರ್ಮದ ಪ್ರಭಾವ ಮಧ್ಯಯುಗದ ವಿಚಾರವಂತ ಈರಿಜೀನ (9ನೆಯ ಶತಮಾನ) ಎಂಬಾತನಲ್ಲಿ ಪ್ರಥಮವಾಗಿ ಕಂಡು ಬರುತ್ತದೆ. ತರುವಾಯ 11ನೆಯ ಶತಮಾನದ ಮಠಪಾಠಶಾಲೆಗಳಲ್ಲಿ ಕ್ರೈಸ್ತಧರ್ಮದ ವೈಚಾರಿಕ ರೀತಿನೀತಿ ಆರಂಭವಾದರೂ ಅದು ಬೈಬಲ್ಲಿನ ಮೇಲೆ ಭಾಷ್ಯರೂಪದಲ್ಲಿ ಆಯಿತೇ ಹೊರತು ತಾರ್ಕಿಕ ಸಿದ್ಧಾಂತದ ಬಗೆಯಲ್ಲಿ ಆಯಿತೆಂದು ಹೇಳಲಾಗುವುದಿಲ್ಲ. ಆ ಕಾಲದ ದೇವತಾ ಶಾಸ್ತ್ರಜ್ಞರಲ್ಲಿ ಆನ್‍ಸೆಲ್ಮ್ ಪ್ರಮುಖನಾದವ. ಆತ ದಿವ್ಯದರ್ಶನ (ರಿವೀಲೇಶನ್) ಪ್ರಕರಣದ ಮೂಲವನ್ನು ವಿಮರ್ಶಿಸಿ ಅದು ಹೇಗೆ ತರ್ಕಬದ್ಧವಾಗಿದೆಯೆಂದು ವಿವರಿಸಿದನು. ಹಾಗೆಯೇ ಕ್ರೈಸ್ತತತ್ತ್ವದಲ್ಲಿ ನಂಬಿಕೆ ಮತ್ತು ತರ್ಕಗಳಿಗೆ ಇರುವ ಸಂಬಂಧವನ್ನು ಕುರಿತು ಏಬಿಲಾರ್ಡ್ ಎಂಬಾತ ಬಹಳ ಪ್ರಾಜ್ಞತೆಯಿಂದ ವಿಚಾರಮಾಡಿದ. 

	ಏಬಿಲಾರ್ಡ್ ಚಾಂಪಿಯಾದ ವಿಲಿಯಮ್ ಎಂಬಾತನೊಡನೆ ಜಿಜ್ಞಾಸೆ ನಡೆಸಿ ಪ್ರಚಂಡ ದಿಗ್ವಿಜಯ ಪಡೆದ. ವಿಲಿಯಮ್‍ನ ಶಿಷ್ಯರ ಪೈಕಿ ಸಂತ ವಿಕ್ಟರ್ ಪ್ರಸಿದ್ಧನಾದವ. ಅವನು ತರ್ಕ ಕ್ಷೇತ್ರ ಧರ್ಮಕ್ಕೆ ಹೊರತಾದ ಪ್ರತ್ಯೇಕ ಕ್ಷೇತ್ರವೆಂದು ಪ್ರತಿಪಾದಿಸಿದ. ಏಬಿಲಾರ್ಡ್‍ನ ಶಿಷ್ಯರಲ್ಲಿ ಪೀಟರ್ ಲೊಂಬಾರ್ಡ್ ಮತ್ತು ಶಾಸ್ತ್ರಜ್ಞ ಬಂಡಿನೆಲ್ಲಿ (ಮೂರನೆಯ ಪೋಪ್ ಅಲೆಗ್ಸಾಂಡರ್) ಹೆಸರಾಂತವರು. ಏಬಿಲಾರ್ಡ್‍ನು ಸಂತ ಬರ್ನಾರ್ಡ್‍ನನ್ನು ಪಾಷಾಂಡವಾದಿ, ಅಸಾಂಪ್ರದಾಯಿಕವಾದಿ ಎಂದು ತಿರಸ್ಕರಿಸಿ ತರ್ಕವಾದದ ಬಗೆಗೆ ಮತಶ್ರದ್ಧಾವಂತರಲ್ಲಿ ಬುದ್ಧಿಭೇದ ಉಂಟುಮಾಡಿದ ನೆಂದೇ ಹೇಳಬೇಕು. 

	12ನೆಯ ಶತಮಾನದಲ್ಲಿ ಅರಿಸ್ಟಾಟಲನ ಗ್ರಂಥಗಳ ಭಾಷಾಂತರ ದೊರಕುವಂತಾಗಿ ಅದರಿಂದ ತತ್ತ್ವಶಾಸ್ತ್ರಜ್ಞಾನ ಒಂದು ಸಂಯೋಜಿತ ರೂಪ ಪಡೆಯಿತು. 13ನೆಯ ಶತಮಾನದ ಆದಿಭಾಗದಲ್ಲಿ ವಿಶ್ವವಿದ್ಯಾಲಯಗಳು ಪ್ರಧಾನ ಜ್ಞಾನಪೀಠಗಳಾಗಿದ್ದು ಮಠಪಾಠಶಾಲೆಗಳ ಸ್ಥಾನವನ್ನು ಆಕ್ರಮಿಸಿದುವು. ಡಾಮಿನಿಕನ್ ಮತ್ತು ಫ್ರಾನ್ಸಿಸ್ಕನ್ ಪಂಥಗಳವರು ಉಪನ್ಯಾಸಕರ ಸ್ಥಾನವಹಿಸಿಕೊಂಡರು. ಸ್ಪೇನ್ ದೇಶದ ಅವಿಸಿನ್ನ ಮತ್ತು ಅವಿರ್ರೋ ಪಂಥಗಳವರು ಅರಿಸ್ಟಾಟಲನ ಬಗೆಗೆ ಪ್ರಚಾರಕ್ಕೆ ತಂದ ಅರಬ್ಬೀ ವ್ಯಾಖ್ಯಾನಗಳು ಪ್ರಸಿದ್ಧವಾದವು. ಇವನ್ನು ಪಠಿಸಿದ ಕ್ರೈಸ್ತಶಾಸ್ತ್ರಜ್ಞರು, ಯಾವುದು ನಂಬಿಕೆಯ ದೃಷ್ಟಿಯಿಂದ ನಿಜವೋ ಅದು ತರ್ಕಕ್ಕೆ ವಿರೋಧವೆಂದೂ ಹಾಗೆಯೇ ಅದರ ವಿಪರ್ಯಯವೂ ಎಂದು ಅರಿತು ದಿಗ್ಭ್ರಾಂತರಾದರು. ಪ್ಯಾರಿಸನ ಅಧಿಕಾರ ವರ್ಗದವರು ಅರಿಸ್ಟಾಟಲನ ವ್ಯಾಸಂಗವನ್ನೇ ಬಹಿಷ್ಕಾರ ಮಾಡಿದರು. ಇದರ ಪರಿಣಾಮವಾಗಿ ಅರಿಸ್ಟಾಟಲನ ವ್ಯಾಸಂಗ ಹೆಚ್ಚಿದುದಲ್ಲದೆ ಅವನ ಕೀರ್ತಿಯೂ ಹೆಚ್ಚಿತು. 

	13ನೆಯ ಶತಮಾನದ ಮಧ್ಯಭಾಗದ ವೇಳೆಗೆ ಅರಿಸ್ಟಾಟಲನ ಗ್ರಂಥಗಳ ಅರಬ್ಬೀ ವ್ಯಾಖ್ಯಾನಗಳು ಪೂರ್ಣವಾಗಿ ಖಂಡಿಸಲ್ಪಟ್ಟವು. ಡಾಮಿನಿಕನ್ ಪಂಥದ ಸಂತ ಆಲ್ಬರ್ಟಸ್ ಮ್ಯಾಗ್‍ನಸ್, ಸಂತ ಥಾಮಸ್ ಆಕ್ವಿನಾಸ್ ಮತ್ತು ಫ್ರಾನ್ಸಿಸ್ಕನ್ ಪಂಥದ ಸಂತ ಬೋನಾವೆಂಚರ್ ಪ್ರಸಿದ್ಧರಾದವರು. ಸಂತ ಥಾಮಸ್ ಮಧ್ಯಯುಗದ ಅತ್ಯಂತ ದೊಡ್ಡ ತತ್ತ್ವಜ್ಞಾನಿ ಎನಿಸಿದ. ಇವನ ಶಾಸ್ತ್ರ ಕೃತಿಗಳು ಬಹಳ ಸೂಕ್ಷ್ಮವಾಗಿಯೂ ವಿವರವಾಗಿಯೂ ವ್ಯವಸ್ಥಿತವಾಗಿಯೂ ಇವೆ. ಇವನು ತತ್ತ್ವಶಾಸ್ತ್ರವನ್ನೂ ದೇವತಾ ಶಾಸ್ತ್ರವನ್ನೂ ಪೃಥಕ್ಕರಣ ಮಾಡಿದ. ಎರಡಕ್ಕೂ ಇರುವ ಸಂಬಂಧವನ್ನು ವಿವರಿಸಿದ. ದೇವರು ಆದಿಕಾರಣ ಎಂದ. ಅವಿರ್ರೋ ಸಿದ್ಧಾಂತವನ್ನು ಪೂರ್ಣವಾಗಿ ವಿರೋಧಿಸಿ ತರ್ಕಲಭ್ಯಜ್ಞಾನಕ್ಕೂ ನಂಬಿಕೆಯಿಂದ ಜನಿಸಿದ ಜ್ಞಾನಕ್ಕೂ ವಿರೋಧವಿಲ್ಲವೆಂದೂ ಯಾವುದು ಅತರ್ಕವೋ ಅದು ಅಸತ್ಯವೆಂದೂ ದಿವ್ಯದರ್ಶನದಿಂದ ಗೋಚರವಾದುದು ತರ್ಕಕ್ಕೆ ನಿಲುಕದಿದ್ದರೂ ಅಸತ್ಯವೆನ್ನಲಾಗುವುದಿಲ್ಲವೆಂದೂ ಬೋಧಿಸಿದ. ಇವನ ಕಾಲದಲ್ಲಿ ಇವನ ಸಿದ್ಧಾಂತಗಳು ಪ್ರಭಾವಯುತವಾಗಲಿಲ್ಲ. ಅಗಸ್ಟೈನ್‍ನ ಸಂಪ್ರದಾಯದಲ್ಲಿ ಬಂದ ಸಂತ ಬೋನಾವೆಂಚರ್ ಸಂತ ಥಾಮಸನ ಸಿದ್ಧಾಂತಗಳನ್ನು ಖಂಡಿಸಿದ. ಅವನ ಅನಂತರ ಆಕ್ಸ್‍ಫರ್ಡ್‍ನ ಡನ್‍ಸ್ಕಾಟಸ್ ಅರಿಸ್ಟಾಟಲನ ಸಿದ್ಧಾಂತಕ್ಕೆ ಹೊಸರೂಪವನ್ನು ಕೊಟ್ಟ. ಒಳ್ಳೆಯದು ದೇವರ ಇಚ್ಛೆಗನುಗುಣವಾಗಿಯೇ ಒಳ್ಳೆಯದಾಗಿದೆ ಎಂದು ಈತ ಪ್ರತಿಪಾದಿಸಿದ. ಇವನ ಪಂಥದ ಓಕಂನ ವಿಲಿಯಮ್ ತನ್ನ ಕಾಲದ ಮಹಾಕ್ರಾಂತಿಕಾರೀ ವಿಚಾರವಂತನಾಗಿದ್ದ. ನಂಬಿಕೆಗೆ ತರ್ಕದ ಆಧಾರವಿಲ್ಲವೆಂದೂ ತತ್ತ್ವಶಾಸ್ತ್ರಕ್ಕೂ ಮತಧರ್ಮಕ್ಕೂ ಭಿನ್ನತೆಯಿದೆಯೆಂದೂ ವಾದಿಸಿದ. 15ನೆಯ ಶತಮಾನದ ಬಹುಮಂದಿ ವಿದ್ಯಾವಂತರು ಇದೇ ವಾದವನ್ನು ಎತ್ತಿಹಿಡಿದರು. ತತ್ತ್ವಜ್ಞಾನ ದೇವತಾ ಶಾಸ್ತ್ರಕ್ಕೆ ವಿರುದ್ಧವೆಂಬ ಭಾವನೆ ಬೆಳೆಯಿತು. ನಂಬಿಕೆ ಪ್ರಧಾನವಾದ ಜನ ಪ್ರಾಟೆಸ್ಟಂಟ್ ಸುಧಾರಕರಲ್ಲಿ ಪ್ರಧಾನವಾಗಿ ಕಂಡ ತರ್ಕವಾದವನ್ನು ಅನುಮಾನದಿಂದ ಕಂಡರು. 

	ಪುನರುತ್ಥಾನದ ಕಾಲದಲ್ಲಿ ಹೊಸ ಗ್ರಂಥಗಳ ಅಧ್ಯಯನದ ಪರಿಣಾಮವಾಗಿ ತತ್ತ್ವ ಶಾಸ್ತ್ರದಲ್ಲಿ ನಂಬಿಕೆಯುಳ್ಳವರು ಕ್ರೈಸ್ತಸಿದ್ಧಾಂತಕ್ಕೆ ಕೇವಲ ವಾಚಾ ಗೌರವವಿತ್ತರು. ಇದರ ಪರಿಣಾಮವಾಗಿ ಮಧ್ಯಯುಗದ ತತ್ತ್ವಸಿದ್ಧಾಂತ ಬಹಳ ಹಿಂದೆಬೀಳುವಂತಾಯಿತು. ಆದರೂ ತರ್ಕ ಪ್ರಧಾನ ತತ್ತ್ವಜ್ಞಾನಪದ್ಧತಿ ರಾಜಕಾರಣ, ನ್ಯಾಯನಿಬಂಧನೆ, ಅಂತಾರಾಷ್ಟ್ರೀಯ ನ್ಯಾಯಪದ್ಧತಿಯ ಬೆಳೆವಣಿಗೆ ಇವುಗಳಿಗೆ ಮಾತ್ರ ಮೀಸಲಾಯಿತು. 

	15ನೆಯ ಶತಮಾನದ ಕೊನೆಯ ಭಾಗದಲ್ಲಿ ಥಾಮಸನ ಸಿದ್ಧಾಂತ ಮತ್ತೆ ಪುನರುಜ್ಜೀವನಗೊಂಡಿತು. ಜೆಸೂಯಿಟರು ಮತ್ತು ಸಂತ ಇಗ್ನೇಷಿಯಸ್ ಇದನ್ನು ತಮ್ಮ ಅಧಿಕೃತ ಸಿದ್ಧಾಂತವೆಂದು ಘೋಷಿಸಿದರು. ಪ್ರತಿಯೊಂದು ಕೆಥೊಲಿಕ್ ವಿದ್ಯಾಲಯವೂ ಸ್ಕಾಟಸ್‍ವಾದಿ ಪರಂಪರೆಯನ್ನು ಬೆಳೆಸಿಕೊಂಡಿತು. 1879ರಲ್ಲಿ 13ನೆಯ ಲಿಯೋ ಎಂಬಾತ ಥಾಮಸನ ಸಿದ್ಧಾಂತವನ್ನು ಕ್ರೈಸ್ತಮಠದ ಅಧಿಕೃತ ತತ್ತ್ವಜ್ಞಾನವೆಂದು ಘೋಷಿಸಿದ. ಇದು ಮತಧರ್ಮದ ನಂಬಿಕೆಯಾಗಬೇಕೆಂಬ ನಿರ್ಬಂಧವಾಗಿರಲಿಲ್ಲ. ಆಧುನಿಕರಲ್ಲಿ ಜಾಕಸ್ ಮಾರಿಟಸ್ ಪ್ರಸಿದ್ಧ ಥಾಮಸ್‍ವಾದಿಯಾಗಿದ್ದಾನೆ.					
		(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ